Close

    ಪ್ರಾಧಿಕಾರ ವಿಭಾಗಗಳು

    ಪ್ರಾಧಿಕಾರವು ಈ ಕೆಳಕಂಡ ವಿಭಾಗಗಳಿಂದ ರಚನೆಯಾಗಿದೆ.

    ಭೂಸ್ವಾಧೀನ ವಿಭಾಗ: ಅಭಿಯಂತರ ವಿಭಾಗದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದು ಭೂಸ್ವಾಧೀನ ವಿಭಾಗದ ಕರ್ತವ್ಯವಾಗಿರುತ್ತದೆ.

    ನಗರ ಯೋಜನಾ ವಿಭಾಗ: ಬೆಂಗಳೂರು ಮಹಾನಗರ ಪ್ರದೇಶಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವುದು ಹಾಗೂ ಹತ್ತು ವರ್ಷಗಳಿಗೊಮ್ಮೆ ಪರಿಷ್ಕರಿಸುವುದು, ನೂತನ ಬಡಾವಣೆ ನಕ್ಷೆಗಳನ್ನು ತಯಾರಿಸುವುದು ಹಾಗೂ ಸಮೂಹ ವಸತಿ ಯೋಜನೆಗಳಿಗೆ ಮತ್ತು ಖಾಸಗಿ ಬಡಾವಣೆಗಳಿಗೆ ಅಭಿವೃದ್ಧಿ ನಕ್ಷೆಯನ್ನು ಅನುಮೋದಿಸುವುದು ಹಾಗೂ ಬೆಂಗಳೂರು ನಗರ ಯೋಜನಾ ಪ್ರಾಧಿಕಾರವಾಗಿ, ಪ್ರಾಧಿಕಾರದ ಪ್ರಕಾರ್ಯಗಳಲ್ಲಿ ನೆರವು ನೀಡುವುದು ನಗರ ಯೋಜನಾ ವಿಭಾಗದ ಹೊಣೆಯಾಗಿದೆ.

    ಅಭಿಯಂತರ ವಿಭಾಗ: ನೂತನ ಬಡಾವಣೆಗಳ ನಿರ್ಮಾಣ, ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ವಿವಿಧ ಮೂಲಭೂತ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಅಭಿಯಂತರ ವಿಭಾಗದ ಪ್ರಾಥಮಿಕ ಕರ್ತವ್ಯವಾಗಿರುತ್ತದೆ. ಪ್ರಾಧಿಕಾರದ ಬಡಾವಣೆಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ವಿದ್ಯುಚ್ಛಕ್ತಿ ಕೆಲಸಗಳನ್ನು ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಮೂಲಕ ಕಾರ್ಯಗತಗೊಳಿಸುವುದು ಅಭಿಯಂತರ ವಿಭಾಗದ ಮುಖ್ಯ ಹೊಣೆಯಾಗಿದೆ.

    ಆಡಳಿತ ವಿಭಾಗ: ಆಡಳಿತ ವಿಭಾಗವು ನಿವೇಶನಗಳು, ಅಂಗಡಿಗಳು ಮತ್ತು ಮನೆಗಳ / ಫ್ಲ್ಯಾಟ್ಸ್ಗಳ ಹಂಚಿಕೆ ಕಾರ್ಯ, ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ಕಾರ್ಯ ಮತ್ತು ಹಂಚಿಕೆ ನಂತರದ ಕಾರ್ಯ, ಆಸ್ತಿ ತೆರಿಗೆ, ಗುತ್ತಿಗೆ ಹಣ ಮತ್ತು ಅಂಗಡಿ ಪರವಾನಗಿ ಶುಲ್ಕ ವಸೂಲು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಈ ವಿಭಾಗಕ್ಕೆ ಸಾಮಾನ್ಯ ಆಡಳಿತ ವಿಷಯ ಮತ್ತು ಸಿಬ್ಬಂದಿ ಇವುಗಳ ನಿರ್ವಹಣೆಯ ಜವಾಬ್ದಾರಿಯೂ ಇದೆ.

    ಆರ್ಥಿಕ ವಿಭಾಗ: ಹಣಕಾಸಿನ ವಿಷಯಗಳಲ್ಲಿ ಪ್ರಾಧಿಕಾರಕ್ಕೆ ಸಲಹೆ ನೀಡುವುದು ಹಾಗೂ ಪ್ರಾಧಿಕಾರದ ಲೆಕ್ಕಪತ್ರಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು / ಅಲ್ಲದೆ ಪ್ರಾಧಿಕಾರಕ್ಕೆ ಬರಬೇಕಾಗಿರುವ ಬಾಕಿ, ಬೇಡಿಕೆ ಮತ್ತು ವಸೂಲಾತಿಯ ಮೇಲ್ವಿಚಾರಣೆಯನ್ನು ಸಹಾ ನೋಡಿಕೊಳ್ಳುವುದು ಆರ್ಥಿಕ ವಿಭಾಗದ ಹೊಣೆಯಾಗಿರುತ್ತದೆ.

    ಕಾನೂನು ವಿಭಾಗ: ಪ್ರಾಧಿಕಾರಕ್ಕೆ ಕಾನೂನು ವಿಷಯಗಳಲ್ಲಿ ಸಲಹೆ ನೀಡುವುದು ಹಾಗೂ ವಿವಿಧ ನ್ಯಾಯಾಲಯಗಳಲ್ಲಿರುವ ವ್ಯಾಜ್ಯಗಳಲ್ಲಿ ಪ್ರಾಧಿಕಾರದ ಹಿತಾಸಕ್ತಿಗಳನ್ನು ಸಂರಕ್ಷಿಸುವುದು ಕಾನೂನು ವಿಭಾಗದ ಕರ್ತವ್ಯವಾಗಿರುತ್ತದೆ.

    ಸಾರ್ವಜನಿಕ ಸಂಪರ್ಕ ವಿಭಾಗ: ಪ್ರಾಧಿಕಾರದ ಸಾರ್ವಜನಿಕ ಸಂಪರ್ಕ, ಮಾಧ್ಯಮ ಸಂಪರ್ಕ ಕುರಿತ ಪತ್ರಿಕಾ ಪ್ರಕಟಣೆ, ಸಾರ್ವಜನಿಕ ದೂರು ನಿರ್ವಹಣೆ, ಅತಿಥಿ ಸತ್ಕಾರ, ಸಮಾರಂಭಗಳ ವ್ಯವಸ್ಥೆ ಇತ್ಯಾದಿಗಳನ್ನು ಸಾರ್ವಜನಿಕ ಸಂಪರ್ಕ ವಿಭಾಗವು ನೆರವೇರಿಸುತ್ತದೆ.

    ಅರಣ್ಯ ಮತ್ತು ತೋಟಗಾರಿಕಾ ವಿಭಾಗ: ಅರಣ್ಯ ಮತ್ತು ತೋಟಗಾರಿಕಾ ವಿಭಾಗವು ಪರಿಸರ ಸಂಬಂಧಿ ಕಾರ್ಯಾಚರಣೆ, ಕೆರೆಗಳ ಪುನಶ್ಚೇತನ / ನಿರ್ವಹಣೆ ಗಿಡಗಳನ್ನು ನೆಡುವುದು, ಪೋಷಿಸುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತದೆ.

    ಎಸ್ಟೇಟ್ ವಿಭಾಗ: ಎಸ್ಟೇಟ್ ವಿಭಾಗವು ಪ್ರಾಧಿಕಾರದ ಸ್ವತ್ತುಗಳ ನಿರ್ವಹಣೆ, ಅತಿಕ್ರಮಣಕಾರರಿಂದ ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯುವ ಕ್ರಮ ಮತ್ತು ಪ್ರಾಧಿಕಾರದ ವಾಣಿಜ್ಯ ಸಂಕೀರ್ಣಗಳಲ್ಲಿನ ಅಂಗಡಿ ಮಳಿಗೆಗಳ / ಕಛೇರಿ ಸ್ಥಳಾವಕಾಶಗಳ ಹಂಚಿಕೆ ಹಾಗೂ ಪರವಾನಗಿ ಶುಲ್ಕ ವಸೂಲಿ ಕಾರ್ಯವನ್ನು ನಿರ್ವಹಿಸುತ್ತದೆ.

    ವಿಶೇಷ ಜಾರಿದಳ ವಿಭಾಗ: ಜಾಗೃತದಳ ವಿಭಾಗವು ಪ್ರಾಧಿಕಾರದ ಆಸ್ತಿಗಳ ಒತ್ತುವರಿ, ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಹಾಗೂ ಹಸಿರುಪಟ್ಟಿ ಪ್ರದೇಶವನ್ನು ಸಂರಕ್ಷಿಸುವ ಕಾರ್ಯ ನಿರ್ವಹಿಸುತ್ತದೆ. ವಿವಾದಾಸ್ಪದ ದಾಖಲಾತಿಗಳ ಪರಿಶೀಲನೆ / ವಿಚಾರಣೆ ಕಾರ್ಯವನ್ನು ಕೈಗೊಳ್ಳುತ್ತಿರುತ್ತದೆ.

    ಗಣಕಯಂತ್ರ ವಿಭಾಗ: ಇಡಿಪಿ ವಿಭಾಗವು ಪ್ರಾಧಿಕಾರದ ಕಛೇರಿಗಳ ಗಣಕೀಕರಣ ಮತ್ತು ದಾಖಲೆಗಳ ಗಣಕೀಕರಣ ಕಾರ್ಯವನ್ನು ನಿರ್ವಹಿಸುತ್ತದೆ.